ರಾಳ್ಳಪಲ್ಲಿ, ಅನಂತಕೃಷ್ಣಶರ್ಮ
1893-1979. ಕನ್ನಡ, ತೆಲಗು ಮತ್ತು ಸಂಸ್ಕøತ ಭಾಷೆಗಳ ಪಂಡಿತರು, ಪ್ರಸಿದ್ಧ ವಿದ್ವಾಂಸರು, ಸಂಗೀತಜ್ಞರು ಮತ್ತು ಶಾಸ್ತ್ರಕಾರರು. ಅನಂತಪುರ ಜಿಲ್ಲೆಯ ರಾಳ್ಳಪಲ್ಲಿಯಲ್ಲಿ 1893 ಜನವರಿ 23ರಂದು ಜನಿಸಿದರು. ತಂದೆ ಕೃಷ್ಣಮಾಚಾರ್ಯರು ಸಂಸ್ಕøತ ಪಂಡಿತರು. ಜೊತೆಗೆ ಸಂಗೀತಪ್ರೇಮಿಗಳು. ಇವರ ಪ್ರಾರಂಭದ ವಿದ್ಯಾಭ್ಯಾಸ ತಂದೆಯವರ ಬಳಿಯಲ್ಲಿಯೇ ನಡೆಯಿತು. ಅನಂತರ ಮೈಸೂರು ಚಾಮರಾಜ ಸಂಸ್ಕøತ ಪಾಠಶಾಲೆಯಲ್ಲಿ ಹಾಗೂ ಪರಕಾಲ ಮಠದ ಶ್ರೀಕೃಷ್ಣಬ್ರಹ್ಮತಂತ್ರಯತೀಂದ್ರರಲ್ಲಿ ವ್ಯಾಕರಣ ಮತ್ತು ಅಲಂಕಾರಗಳನ್ನು ಕುರಿತು ವಿಶೇಷ ವ್ಯಾಸಂಗಮಾಡಿದರು. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತರು. ಕರಿಗಿರಿರಾಯರು, ಚಿಕ್ಕರಾಮರಾಯರು ಮತ್ತು ಬಿಡಾರಂ ಕೃಷ್ಣಪ್ಪನವರು ಇವರ ಸಂಗೀತ ಗುರುಗಳು. 

	ಮೈಸೂರು ಮಹಾರಾಜ ಕಾಲೇಜಿನ ತೆಲುಗು ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ (1912) ಇವರು ಸು. 38 ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದು 1949ರಲ್ಲಿ ನಿವೃತ್ತರಾದರು. ಅನಂತರ ತಿರುಪತಿಯ ಪ್ರಾಚ್ಯ ಸಂಶೋಧನಾಲಯದಲ್ಲಿ ರೀಡರ್ ಹುದ್ದೆ ವಹಿಸಿಕೊಂಡು ತಾಳ್ಳಪಾಕ ಕವಿಗಳ ಗೇಯ ರಚನೆಗಳನ್ನು ಕುರಿತು ಸಂಶೋಧನೆ ನಡೆಸಿ, ತಾಳ್ಳಪಾಕಪಾಟಲು ಗ್ರಂಥವನ್ನು ಪ್ರಕಟಿಸಿದರು (1952). ಕವಿ ವೇಮನ ಮತ್ತು ಅವನ ಪದ್ಯಗಳನ್ನು ಕುರಿತು ಮಾಡಿರುವ ಸಂಶೋಧನೆ, ಆಂಧ್ರ ವಿಶ್ವಕಲಾ ಪರಿಷತ್ತಿನ ಆಶ್ರಯದಲ್ಲಿ ಮಾಡಿದ ಉಪನ್ಯಾಸ, ಶ್ರೀಕೃಷ್ಣದೇವರಾಯವರ್ಧಂತಿ ಸಮಾರಂಭದ ಭಾಷಣ, ಪ್ರಸಿದ್ಧ ವಾಗ್ಗೇಯಕಾರರು ಹಾಗೂ ಗಾನಕಲೆಯನ್ನು ಕುರಿತಾದ ಬರೆಹ-ಭಾಷಣಗಳು ಇವರ ಪಾಂಡಿತ್ಯ ಪ್ರತಿಭೆಗಳಿಗೆ ಸಾಕ್ಷಿಯಾಗಿವೆ. ಇವರ ಕೆಲವು ಬರೆಹ-ಭಾಷಣಗಳು ಪುಸ್ತಕಗಳ ರೂಪದಲ್ಲೂ ಪ್ರಕಟವಾಗಿವೆ. ಅವುಗಳಲ್ಲಿ ಗಾನಕಲೆ (1952), ಸಾಹಿತ್ಯ ಮತ್ತು ಜೀವನ ಕಲೆ (1954) ಎಂಬ ಕನ್ನಡ ಗ್ರಂಥಗಳು ಮತ್ತು ವೇಮನಸಾರ ಸ್ವತೋಪನ್ಯಾಸಮುಲು (1935) ಎಂಬ ತೆಲುಗು ಗ್ರಂಥ ಮುಖ್ಯವಾದವು. ಆಂಧ್ರ ಪ್ರದೇಶ ಸಾಹಿತ್ಯ ಅಕಾಡೆಮಿ ಮತ್ತು ಸಂಗೀತ ಅಕಾಡೆಮಿಗಳ ಕೆಲಸ ಕಾರ್ಯಗಳಲ್ಲೂ ಇವರು ಸಹಕರಿಸಿದ್ದಾರೆ. ಶಂಕರಾಭರಣ ಮತ್ತು ಕಾನಡಾ ರಾಗಗಳಲ್ಲಿ ಸ್ವರಜತಿಗಳನ್ನೂ ಹಾಗೂ ಸುಮಾರು ಇಪ್ಪತ್ತೈದು ಕೀರ್ತನೆಗಳನ್ನೂ ರಚಿಸಿರುವ ಇವರು ಹಾಡಿಕೆ ಮತ್ತು ಪಿಟೀಲು ವಾದನ-ಎರಡರಲ್ಲೂ ಅತಿಶಯವಾದ ಸಿದ್ಧಿಪಡೆದಿದ್ದರು. ಕ್ಷೇತ್ರಯ್ಯನ ಪದಗಳ ಗಾಯನದಲ್ಲಿ ಇವರು ಪಡೆದಿದ್ದ ಯಶಸ್ಸು ಮೇಲ್ಮಟ್ಟದ್ದು. 

	ನೆಲ್ಲೂರಿನ ಆಂಧ್ರಕಲಾ ನಾಟಕ ಪರಿಷತ್ತು (1938), ಕಾಕಿನಾಡದ ಸರಸ್ವತೀ ಗಾನಸಭೆ (1954), ಮೈಸೂರು ಬಿಡಾರಂ ಕೃಷ್ಣಪ್ಪನವರ ಸೀತಾರಾಮ ಮಂದಿರದ ಚತುರ್ಥ ಸಂಗೀತ ಸಮ್ಮೇಳನ (1961), ಬೆಂಗಳೂರು ಗಾಯನ ಸಮಾಜದ ದ್ವಿತೀಯ ಸಂಗೀತ ಸಮ್ಮೇಳನ(1970), ಮದರಾಸು ಸಂಗೀತ ಅಕಾಡೆಮಿಯ 48ನೆಯ ವಾರ್ಷಿಕ ಅಧಿವೇಶನ (1974) ಮುಂತಾದ ಹತ್ತಾರು ಪಂಡಿತ ಪರಿಷತ್ತುಗಳು ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಗೌರವಿಸಿದೆ. 

	ಇವರಿಗೆ ಕರ್ನಾಟಕ ರಾಜ್ಯ ಸಂಗೀತ ನಾಟಕ ಅಕಾಡೆಮಿ ವಿಶೇಷ ಪ್ರಶಸ್ತಿ ನೀಡಿದೆ (1969). ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಸದಸ್ಯತ್ವ (1973), ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (1974) ಪ್ರಶಸ್ತಿಗಳೂ ಇವರಿಗೆ ಲಭಿಸಿವೆ. ಗಾನಕಲಾಪ್ರಪೂರ್ಣ, ಗಾನಕಲಾಸಿಂಧು ಮುಂತಾದ ಗೌರವ ಬಿರುದುಗಳೂ ಬಂದಿವೆ. ನಮ್ಮ ದೇಶ ಬಲಿಷ್ಠವಾಗಬೇಕಾದರೆ, ಪ್ರತಿಷ್ಠಾರ್ಹವಾಗಬೇಕಾದರೆ, ನೀತಿವಂತವಾಗಬೇಕಾದರೆ ನಿಷ್ಕಲತೆ ತೊಲಗಬೇಕು. ನಡೆಯುವ ನಡೆ, ಆಡುವ ಆಟ, ನುಡಿಯುವ ಮಾತು, ನೆನೆಯುವ ಭಾವ-ಇವುಗಳೆಲ್ಲಾ ಕಲಾದೃಷ್ಟಿಯ ಅಧಿಕಾರಕ್ಕೆ ಒಳಪಡಬೇಕು. ಜೀವನವೇ ಲಯಬದ್ಧವಾಗಿ ಒಟ್ಟಂದದಿಂದ ಶೋಭಿಸಬೇಕು. ಅದೇ ಸಂಸ್ಕøತಿಯ ಕುರುಹು. ಸರಸ್ವತಿ ದೇವಿಯ ಆರಾಧನೆ ಎಂಬ ಇವರ ಮಾತುಗಳು ಅರ್ಥಸಂಪನ್ನವಾಗಿದ್ದು, ಇವರ ಜೀವಿತ-ಸಾಧನೆಯ ಮೇಲಣ ವ್ಯಾಖ್ಯೆಯಂತಿವೆ. ಇವರು 1979ರಲ್ಲಿ ನಿಧನರಾದರು.	
						  
(ಎಸ್.ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ